ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪೂರ್ವಭಾಗ ದಲ್ಲಿರುವ ಅತ್ಯಂತ ದೊಡ್ಡ ಜಿಲ್ಲೆ. ರಾಜ್ಯದ ವಿಸ್ತೀರ್ಣದಲ್ಲಿ ಸೇ. 37 ಭಾಗವನ್ನು ಹೊಂದಿದೆ. ಈ ಜಿಲ್ಲೆಯ ಒಟ್ಟು ವಿಸ್ತೀರ್ಣ 82,665 ಚ.ಕಿಮೀ. (ಚೀನ ಆಕ್ರಮಿತ 37,555 ಚ.ಕಿಮೀ ಸೇರಿದಂತೆ) ಜನಸಂಖ್ಯೆ 1,17,637. ಇದು ಭಾರತದಲ್ಲೆ ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಪ್ರದೇಶವಾಗಿದೆ. ಹಿಮಾಲಯತಪ್ಪಲಿನ ಗಿರಿಕಂದರಗಳ ಸೌಂದರ್ಯದಿಂದ ಕೂಡಿರುವ ಈ ಜಿಲ್ಲೆ ಟಿಬೆಟ್ ಮಾದರಿಯ ಬೌದ್ಧ ಧಾರ್ಮಿಕ ಸಂಸ್ಕøತಿ ಯನ್ನು ಹೊಂದಿದ್ದು ‘ಪುಟ್ಟ ಟಿಬೆಟ್’ ಎನಿಸಿಕೊಂಡಿದೆ. ಲೇಹ್ ಜಿಲ್ಲಾಡಳಿತ ಕೇಂದ್ರಪಟ್ಟಣ.

ಭೌಗೋಳಿಕ ನೆಲೆ: ಲಡಾಕ್‍ನ ದಕ್ಷಿಣಕ್ಕೆ ಜಾಂಸ್ಕರ್ ಶ್ರೇಣಿ ಮತ್ತು ಹಿಮಾಚಲಪ್ರದೇಶ, ಉತ್ತರಕ್ಕೆ ನುಬ್ರಾ ಕಣಿವೆ ಮತ್ತು ಚೀನ, ಪಶ್ಚಿಮಕ್ಕೆ ಕಾರ್ಗಿಲ್, ಬಾರಾಮುಲ್ಲ, ಗಿಲ್ಗಿಟ್ ಜಿಲ್ಲೆಗಳು ಹಾಗೂ ಸುರುಕಣಿವೆ, ಪೂರ್ವಕ್ಕೆ ಟಿಬೆಟ್. ಇವುಗಳ ನಡುವೆ ಪ್ರಕೃತಿಯ ಚೆಲುವನ್ನು ಮೈಗೂಡಿ ಸಿಕೊಂಡು ಲಡಾಕ್ ಆಕರ್ಷಣೀಯವೆನಿಸಿದೆ.

ಮೇಲ್ಮೈಲಕ್ಷಣ: ಸರ್ ಸಿಡ್ನಿ ಬರ್ನಾರ್ಡ್ ಎಂಬ ಭೌಗೋಳಿಕ ತಜ್ಞ ಹಿಮಾಲಯ ಪರ್ವತಗಳನ್ನು ದಕ್ಷಿಣೋತ್ತರವಾಗಿ 4 ಪ್ರಾದೇಶಿಕ ಭಾಗಗಳನ್ನಾಗಿ ವಿಂಗಡಿಸಿದ್ದಾನೆ. ಅವುಗಳಲ್ಲಿ ಪಂಜಾಬ್ ಹಿಮಾಲಯ ಒಂದು. ಈ ಪಂಜಾಬ್ ಹಿಮಾಲಯವನ್ನು ಮತ್ತೆ 4 ಶ್ರೇಣಿಗಳಾಗಿ ವಿಂಗಡಿಸಲಾಗಿದೆ-ಕಾರಕೋರಂ, ಜಾಂಸ್ಕರ್, ಪಿರ್‍ಪಂಜಾಲ್ ಮತ್ತು ಲಡಾಕ್. ಕಾರಕೋರಂ ಮತ್ತು ಜಾಂಸ್ಕರ್ ಶ್ರೇಣಿಗಳ ಮಧ್ಯೆ ವಾಯವ್ಯದಿಂದ ಆಗ್ನೇಯಕ್ಕೆ ಸು.550 ಕಿಮೀ ಹಬ್ಬಿರುವ ಪ್ರಸ್ಥಭೂಮಿಯೇ ಲಡಾಕ್ ಶ್ರೇಣಿ. ಇದರ ಅಗಲ 100ಮೀ. ಇದು ಭಾರತದಲ್ಲೇ ಎತ್ತರವಾದ ಜಿಲ್ಲೆ. ಸರಾಸರಿ ಎತ್ತರ 5000-8000ಮೀ. ಭಾರತದ ಅತ್ಯಂತ ಎತ್ತರವಾದ ಏ2(8,611ಮೀ) ಶಿಖರ ಲಡಾಕ್‍ನ ಉತ್ತರದ ಗಡಿಯಲ್ಲಿದೆ. ಗಾಷರ್ ಬ್ರಮ್ (8,066ಮೀ), ಮಾಷರ್ ಬ್ರಮ್ (7,821ಮೀ), ಹರ್ಮೋಷ್ (7,391ಮೀ) ಹಾಗೂ ಸಾಸರ್ (7,742ಮೀ)-ಇವು ಲಡಾಕ್‍ನ ಇತರ ಶಿಖರಗಳು.

ಲಡಾಕ್ ಬೆಟ್ಟ ಶ್ರೇಣಿಗಳ ನಡುವೆ ನದಿನಿರ್ಮಿತ ಕಣಿವೆಗಳಿವೆ. ಅವುಗಳಲ್ಲಿ ಖಾರ್ಡುಂಗ್‍ಲಾ ಎಂಬುದು ಪ್ರಪಂಚದಲ್ಲೇ ಎತ್ತರವಾದ ವಾಹನ ಸಂಚಾರಕ್ಕೆ ಯೋಗ್ಯ ಕಣಿವೆ (5,602ಮೀ). ಇಲ್ಲಿನ ಕೆಲವು ಭಾಗಗಳು ಹಿಮದಿಂದಾವೃತವಾಗಿವೆ. ಅಲ್ಲಲ್ಲಿ ಶಿಲಾಸಂಚಯಗಳು ಮತ್ತು ಉಪ್ಪಿನ ಸರೋವರಗಳು ಕಂಡುಬರುತ್ತವೆ. ಇದರಲ್ಲಿ ಸಮುದ್ರಮಟ್ಟದಿಂದ 4,266ಮೀ ಎತ್ತರದಲ್ಲಿರುವ ಪಾಂಗ್‍ಕಾಂಗ್ ಉಪ್ಪು ನೀರಿನ ಸರೋವರ 64 ಕಿಮೀ ಉದ್ದವಿದ್ದು ಸು.3ರಿಂದ 6 ಕಿಮೀ ಅಗಲವಿದೆ.

ನದಿವ್ಯವಸ್ಥೆ: ಸಿಂಧೂನದಿಯ ಮೇಲ್ಕಣಿವೆ ಲಡಾಕ್‍ನಲ್ಲಿದೆ. ಇದು ಆಗ್ನೇಯದಿಕ್ಕಿನಿಂದ ಲಡಾಕ್ ಪ್ರವೇಶಿಸಿ ವಾಯವ್ಯಾಭಿಮುಖವಾಗಿ ಹರಿದು ವಾಯವ್ಯ ಗಡಿದಾಟಿದ ಕೂಡಲೇ ಪಶ್ಚಿಮಕ್ಕೆ ತಿರುಗುತ್ತದೆ. ಷೋಕ್ ಉಪನದಿ ಸಿಂಧೂನದಿಗೆ (ಉತ್ತರಕ್ಕೆ) ಸಮಾನಾಂತರವಾಗಿ ಹರಿಯುತ್ತಾ ಸ್ಕಾರ್ಡುವಿನ ಬಳಿ ಕೂಡಿಕೊಳ್ಳುತ್ತದೆ.

ವಾಯುಗುಣ: ಶೀತ ಮತ್ತು ಶುಷ್ಕವಾದ ವಾಯುಗುಣ. ಹಿಮವೃಷ್ಟಿ ಸರ್ವೇ ಸಾಮಾನ್ಯ. ಇಲ್ಲಿನ ಪರ್ವತ ಶಿಖರ ಭಾಗಗಳು ಬೇಸಗೆಯಲ್ಲೂ ಹಿಮಾಚ್ಛಾದಿತ. ಹಗಲಿನ ಬಿಸಿಲಿಗೆ ಹಿಮ ಕರುಗುವುದುಂಟು. ವರ್ಷದ 6 ತಿಂಗಳು, ಬೇಸಗೆಯಲ್ಲಿ ಸಸ್ಯ ಬೆಳೆವಣಿಗೆ ಸಾಧ್ಯ. ಈ ಅವಧಿಯಲ್ಲಿ ಬಾರ್ಲಿ, ಬತ್ತ, ಗೋದಿ ಮುಂತಾದ ಕೆಲವು ಆಹಾರ ಬೆಳೆಗಳನ್ನು ಬೆಳೆಯುವರು. ಪರ್ವತ ಪ್ರದೇಶವಾಗಿರುವುದರಿಂದ ಜನಸಾಂದ್ರತೆ ಕಡಿಮೆ. ಪ್ರತಿ ಚ.ಕಿಮೀಗೆ 1.4 ಜನ ವಾಸಿಸುವರು. ಜಮ್ಮು-ಕಾಶ್ಮೀರದ ಇತರ ಭಾಗಗಳಲ್ಲಿ ಇಸ್ಲಾಮ್ ಧರ್ಮ ಪ್ರಧಾನವಾಗಿದ್ದರೂ ಲಡಾಕ್‍ನಲ್ಲಿ ಬೌದ್ಧಧರ್ಮ (ಮಹಾಯಾನ ಪಂಗಡ) ಪ್ರಮುಖವಾದುದಾಗಿದೆ. ‘ಗೊಂಪ’ ಎಂದು ಕರೆಯುವ ಅನೇಕ ಬೌದ್ಧ ಸನ್ಯಾಸಿಮಠಗಳಿವೆ. ಜನರು ಹೆಚ್ಚಾಗಿ ಲಡಾಕಿ ಭಾಷೆಯನ್ನಾಡುವರು.

ಆರ್ಥಿಕತೆ ಮತ್ತು ಜನಜೀವನ: ಲಡಾಕ್ ಕೃಷಿ ಪ್ರಧಾನವಾದುದು. ಗೋದಿ, ಬಾರ್ಲಿ, ಕಡಲೆ, ಬಟಾಣಿ ಹಾಗೂ ಇತರೆ ತೋಟಗಾರಿಕಾ ಬೆಳೆಗಳನ್ನು ಬೆಳೆಯುವರು. ಸಾಕಷ್ಟು ಮಳೆ ಬೀಳದಿರುವುದರಿಂದ ಸಾಗುವಳಿ ಹಾಗೂ ಕೃಷಿಕ್ಷೇತ್ರದ ವಿಸ್ತರಣೆ ನೀರಾವರಿಯನ್ನವಲಂಬಿಸಿದೆ. ಹೀಗಾಗಿ ಸಾಗುವಳಿ ಭೂಮಿಯು ನದಿ ಕಣಿವೆಗಳಿಗೆ ಹೊಂದಿಕೊಂಡಂತೆ ಹಂಚಿಕೆ ಯಾಗಿದೆ. ಜಾನುವಾರುಗಳನ್ನು ಸಾಕುವುದು, ಹಣ್ಣುಗಳ ಸಂಸ್ಕರಣೆ ಲಡಾಕಿಯರ ಇತರ ವೃತ್ತಿಗಳಾಗಿವೆ. ಇವರಲ್ಲಿ ಹಣದ ಚಲಾವಣೆಯ ಜೊತೆಗೆ ಚಾಟಿ ಪದ್ಧತಿ (ಬಾರ್ಟರ್ ಸಿಸ್ಟಮ್) ಕೂಡ ರೂಢಿಯಲ್ಲಿದೆ. ಲಡಾಕ್ ಸುಂದರ ಭೂ ದೃಶ್ಯಾವಳಿಗಳಿಂದ ಕೂಡಿದ್ದು ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಪ್ರವಾಸೋದ್ಯಮ ಪ್ರಚಲಿತವಾಗಿದ್ದು ಇದೊಂದು ಪ್ರಮುಖ ಆದಾಯದ ಮೂಲವಾಗಿದೆ. ಚಾರಣ, ಟ್ರೆಕ್ಕಿಂಗ್ ಮತ್ತು ಇತರ ಪ್ರವಾಸಿ ಚಟುವಟಿಕೆಗಳ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.
ಸಾರಿಗೆ: ಹಿಂದೆ ಲಡಾಕ್‍ನ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆ, ಜೋಜಿಲಾ ಕಣಿವೆ ಮಾರ್ಗದ ಮೂಲಕ ಸಾಗುತ್ತಿತ್ತು. ಈಗ ಹಿಮಾಚಲ ಪ್ರದೇಶದಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮೂಲಕ ಸಾಗುತ್ತದೆ. ಲೇಹ್‍ನಲ್ಲಿ ವಿಮಾನ ನಿಲ್ದಾಣವಿದೆ. ಅಲ್ಲಿಂದ ಪ್ರತಿದಿನ ದೆಹಲಿಗೆ ಹಾಗೂ ವಾರಕ್ಕೊಮ್ಮೆ ಶ್ರೀನಗರಕ್ಕೆ ವಾಯುಯಾನ ಸೌಲಭ್ಯವಿದೆ.

ಲಡಾಕ್‍ನ ಅಲೆಮಾರಿ ಬುಡಕಟ್ಟು ಜನರು ತಮ್ಮ ಜಾನುವಾರು ಗಳೊಂದಿಗೆ ಸ್ಥಳದಿಂದ ಸ್ಥಳಕ್ಕೆ ಸಂಚರಿಸುವರು. ಇವರು ದನ, ಕುರಿ, ಮೇಕೆ, ಸಣ್ಣತಳಿ ಕುದುರೆಗಳನ್ನು ಸಾಕುವರು. ಗುಡಾರವೇ ಇವರ ವಸತಿ. ಬಾರ್ಲಿ, ಗೋದಿ, ಹಾಲು, ಮೊಸರು, ಬೆಣ್ಣೆ ಮತ್ತು ಮಾಂಸ ಇವರ ಆಹಾರ. ವಿಶೇಷ ಸಮಾರಂಭಗಳಲ್ಲಿ ಪ್ರಾಣಿಗಳ ರಕ್ತವನ್ನೂ ಆಹಾರದೊಂದಿಗೆ ಸೇವಿಸುವರು. ಆಹಾರ ಸೇವನೆಯ ಅನಂತರ ಚಹಸೇವನೆ ಅಥವಾ ಸ್ಥಳೀಯವಾಗಿ ತಯಾರಿಸುವ ಮದ್ಯವನ್ನು ಸೇವಿಸುವರು. ತುಪ್ಪಟ ಅಥವಾ ಕುರಿತೊಗಲಿನ ಉಡುಪನ್ನು ಧರಿಸುವರು. ‘ಪೋಲೊ’ ಲಡಾಕಿಯರ ಪ್ರಮುಖ ಕ್ರೀಡೆ. ಇತ್ತೀಚೆಗೆ ಲಡಾಕಿಯರಿಗೆ ಕರಕುಶಲತೆ, ನೇಯ್ಗೆ, ಹೆಣಿಗೆ ಮತ್ತು ಹಣ್ಣು ಸಂಸ್ಕರಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಇತಿಹಾಸ: 399ರಲ್ಲಿ ಫಾಹಿಯೆನ್ ಚೀನದಿಂದ ಪೂರ್ವ ತುರ್ಕಿಸ್ತಾನದ ಮಾರ್ಗವಾಗಿ ಗಿಲ್ಗಿಟ್ ಮತ್ತು ಲಡಾಕ್‍ಗೆ ಭೇಟಿನೀಡಿದ್ದ. ಲಡಾಕ್ ಒಂದು ಸ್ವತಂತ್ರ ಬೌದ್ಧ ರಾಜ್ಯವಾಗಿತ್ತು. 17ನೆಯ ಶತಮಾನದಲ್ಲಿ ನಡೆದ 5ನೆಯ ದಲಾಯಿಲಾಮಾ ದಾಳಿಯಿಂದಾಗಿ ಟಿಬೆಟ್‍ನ ಸಂಬಂಧ ಕಡಿದುಬಿತ್ತು. ಕಾಶ್ಮೀರದವರ ಸಹಾಯದಿಂದ ಲಡಾಕ್‍ನ ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ರಾಜಧಾನಿ ಲೇಹ್‍ನಲ್ಲಿ ಮಸೀದಿಯನ್ನು ನಿರ್ಮಿಸಿ ಲಡಾಕ್ ರಾಜನನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸ ಲಾಯಿತು. ಅನಂತರ ಇದನ್ನು ಕಾಶ್ಮೀರದಲ್ಲಿ ಸೇರಿಸಿಕೊಳ್ಳಲಾಯಿತು. ತರುವಾಯ ದೀರ್ಘಕಾಲ ಬ್ರಿಟಿಷ್ ಭಾರತದ ಭಾಗವಾಗಿತ್ತು. ಇಂದು ಪಾಕಿಸ್ತಾನ, ಚೀನ ಮತ್ತು ಭಾರತಗಳ ನಡುವೆ ಹರಿದು ಹಂಚಿಕೆಯಾಗಿದೆ.	

(ಪಿ.ಎಮ್‍ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ